Monday, December 14, 2009

ನೀಲು ೩೨


ಎಷ್ಟು ಓದಿದರೂ
ಏನೆಲ್ಲ ನೋಡಿದರೂ
ಏನೆನೋ ಅನುಭವಿಸಿದರೂ
ಗೊತ್ತಾಗದ ಬದುಕಿನ ಅರ್ಥ
ಬಿಚ್ಚಿಕೊಳ್ಳುವುದು 
ಸಾಯುವ ದಿನ ತುಂಬ ದೂರವಿಲ್ಲ 
ಎಂದು ಗೊತ್ತಾದಾಗ.
ಶುದ್ಧ ಅಪ್ರಯೋಜಕ!

ನೀಲು ೩೧



ನಾನು

ನನ್ನ ಗುಟ್ಟುಗಳನ್ನು

ಒಂಬತ್ತು ತಿಂಗಳು ಹೊತ್ತು

ನೀಲುಗಳಾಗಿ ಹೆರುತ್ತೇನೆ;

ಗಂಡೋ ಹೆಣ್ಣೋ ಪಿಂಡವೋ ಅಷ್ಟಾವಕ್ರವೋ?

ನನಗೆ ಮಾತ್ರ ಅದು ಮುದ್ದು ಮತ್ತು ಮದ್ದು!

Monday, November 30, 2009

ಸೇಡು


ವಿಧಿ ನನ್ನ ಜೊತೆ ಸೇಡು ತೀರಿಸಿಕೊಂಡಾಗಲೆಲ್ಲ
ನಿನ್ನ ನೆನಪುಗಳು ನನ್ನ ಕೈಹಿಡಿದು ರಮಿಸಿವೆ


ಗಾಳಿಯ ಕಣ್ತುಂಬಿತು, ಬಾನಿನ ಬಣ್ಗೆಟ್ಟಿತು
ಮೌನದಲಿ ಈ ಸಂಜೆ ಮೆಲ್ಲ ನಿನ್ನ ಹೆಸರು ಹೇಳಿತು


ಅಂದು ಒಂದಕ್ಷರವನೂ ಹೇಳಲಾಗದೇ ಉಳಿದಿದ್ದು ನಾನಲ್ಲ
ಆ ಕ್ಷಣದ ಅಸಹಾಯಕತೆ ನಿನ್ನನ್ನು ದೂರ ಮಾಡಿತು


ಪ್ರತೀ ಖುಷಿ ಪ್ರತೀ ದುಃಖದಲಿ ನಿನ್ನ ಋಣವಿದೆ
ಪ್ರತೀ ಖುಷಿ ಪ್ರತೀ ದುಃಖವೂ ಇಂದು ಸೇಡು ತೀರಿಸಿಕೊಂಡಿವೆ


(ಬೇಗಂ ಅಖ್ತರ್ ಹಾಡಿದ ಮೆರೆ ನಸೀಬ್ ನೆ ಜಬ್ ಮುಝ್ ಸೆ ಇಂತೆಕಾಮ್ ಲಿಯಾ...ಗಜ಼ಲಿನ ಒಂದು ಭಾವಾನುವಾದ. ಇಲ್ಲಿ ಹಾಡನ್ನು ಕೇಳಿ)

Thursday, November 12, 2009

ನೀಲು ೩೦


ಮದುವೆಯಾಗಿ ಮಕ್ಕಳಾದ ಮೇಲೆ

ಅಚಾನಕ್ಕಾಗಿ ಇತ್ತೀಚೆ ಸಿಕ್ಕ ಹಳೆಯ ಇನಿಯನಿಗೆ

ಮೊಬೈಲು ನಂಬರು ಕೊಟ್ಟರೆ

ನನ್ನ ನಂಬರಿಗೆ ಗಂಡಸಿನ ಹೆಸರು ಬರೆದುಕೊಂಡ.

ಸದ್ಯ, ಇವನನ್ನು ಮದುವೆಯಾಗಲಿಲ್ಲವಲ್ಲ

ಎಂದು ಖುಷಿಯಾಯಿತು!

Tuesday, October 27, 2009

ನೀಲು ೨೯


ಆಡಿದ್ದನ್ನೇ ಆಡುವ
ಏಳುವ-ಕೂಡುವ-ಮಲಗುವ
ಏಕತಾನದ ಯಾಂತ್ರಿಕ ಜಡತ್ವಕ್ಕೆ
ಮೊದಲ ನೋಟದ ಮೊದಲ ಸ್ಪರ್ಶದ
ನಾಚಿಕೆ-ಕುತೂಹಲ-ರೋಮಾಂಚನದ
ನೆನಪು ಕೂಡ
ಬಾಲಿಷವೆನಿಸುವುದು
ಬದುಕಿನ ವಿಪರ್ಯಾಸವಲ್ಲವೇ?

Thursday, October 22, 2009

ಚಹಾ ಮತ್ತು ಪೇಪರ್

ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ. 

ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.

ಓದು ಮುಗಿಸಿ ಕೆಲಸ ಸೇರಿದಾಗ, ಮೈಸೂರಿನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು.

ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!

ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು  ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.

Sunday, October 11, 2009

ನೀಲು ೨೮



ಮತ್ತೆ ಮಳೆ ನಿಂತಿದೆ

ನನ್ನ ಕಿಟಕಿಯ ಗಾಜಿನ ಮೇಲೆ 

ನಿಂತ ನೀರ ಹನಿಗಳನ್ನು

ಪೋಣಿಸುತ್ತೇನೆ

ಖುಷಿಯಾಗುತ್ತದೆ

ಹಾಗೆ ಸುಮ್ಮನೆ

Monday, October 05, 2009

ಕೆಂಡಸಂಪಿಗೆಯ ಸಾವನ್ನು ನೆನೆಯುತ್ತ...

ನಾನೂ ಕೆಂಡಸಂಪಿಗೆಗೆ ಅತ್ಯಂತ ಅನಿಯಮಿತವಾಗಿ ಬರೆಯುತ್ತಿದ್ದೆ, ಆದರೆ ದಿನವೂ ತಪ್ಪದೇ ಓದುತ್ತಿದ್ದೆ. ಕೆಂಡಸಂಪಿಗೆ ನಿಂತಿದೆ, ಒಂದು ಕಡೆ ಕನ್ನಡ ದಿನ ಪತ್ರಿಕೆಗಳ ಸಂಖ್ಯೆ ಮತ್ತು ಪ್ರಸಾರ ದಿನೆ ದಿನೆ ಹೆಚ್ಚಾಗುತ್ತಿದೆ. ಆದರೆ ಕನ್ನಡದ ಜಾಲಗಳು ಮುಚ್ಚುತ್ತಿವೆ. ಜಾಲ ನಡೆಸುವುದು ಅಷ್ಟೊಂದು ದುಬಾರಿಯ ಕೆಲಸವೇ? ನನ್ನ ಬ್ಲಾಗನ್ನೇ ನೋಡಿ. ಅದಕ್ಕೆ ನನ್ನ ಕಡೆಯಿಂದ ಖರ್ಚು - ಸೊನ್ನೆ. ಅದಕ್ಕೆ ನಾನು ತೆರುವ ಬೆಲೆ - blogspot ಎಂಬ ಕೊಂಡಿ. ಅದಿದ್ದರೇನಂತೆ. ನನ್ನ ಬ್ಲಾಗು ನನ್ನದು. ಬ್ಲಾಗಿನ ಹಂಗಿಲ್ಲದೇ ಸ್ವತಂತ್ರವಾಗಿ ಜಾಲ ನಡೆಸುವ ಖರ್ಚು ಎಷ್ಟು ಎಂದು ನನಗೆ ಗೊತ್ತಿಲ್ಲ. ಆದರೆ ಅದು ಪತ್ರಿಕೆ ನಡೆಸುವಷ್ಟು ದುಬಾರಿಯಾಗಿರಲು ಸಾಧ್ಯವೇ ಇಲ್ಲ. ಬಹುಷಃ ದಿನ ಪತ್ರಿಕೆ ನಡೆಸುವ ಖರ್ಚಿನ ಒಂದಂಶವೂ ಆಗುವುದು ಸಂಶಯವೇ (ಗೊತ್ತಿದ್ದವರು ಮಾಹಿತಿ ಕೊಡಬೇಕು)!


ಪಾಶ್ಚಾತ್ಯ ದೇಶಗಳಲ್ಲಿ ದಿನಪತ್ರಿಕೆ ನಡೆಸುವುದೇ ದುಸ್ತರವಾಗುವ ಸ್ಥಿತಿ ಇದೆ. ಅದಕ್ಕೆ ಕಾರಣ ಮನೆ ಮನೆಯಲ್ಲಿ ಕೂತಿರುವ ಇಂಟರ್ನೆಟ್, ಜೇಬು ಜೇಬುಗಳಲ್ಲಿ ಕೂತಿರುವ ಸ್ಮಾರ್ಟ್ ಫೋನುಗಳು. ಅದಕ್ಕೇ ಈ ಪತ್ರಿಕೆಗಳು ತಮ್ಮ ಆದಾಯ ಉಳಿಸಿಕೊಳ್ಳಲು ಜಾಲಕ್ಕೆ ಕೈ ಹಾಕಿವೆ. ಬರೀ ಜಾಲ ಮಾಡಿ ಕೂಡ ಇಲ್ಲಿ ಬದುಕಬಹುದು, ಏಕೆಂದರೆ ಅಷ್ಟೊಂದು ಜನ ಜಾಲಸಂಪರ್ಕ ಹೊಂದಿದ್ದಾರೆ. ಅದಲ್ಲದೇ ಇಂಗ್ಲೀಷು ಬರೀ ಇಂಗ್ಲಂಡು ಅಮೇರಿಕಕ್ಕೆ ಸೀಮಿತವಲ್ಲವಲ್ಲ! ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಕೆನಡಾ, ಮತ್ತು ಎಲ್ಲ ಭಾರತದಂತಹ ದೇಶಗಳಲ್ಲೀ ಇದೆ. ಜಾಹಿರಾತುಗಳು ಆಯಾ ದೇಶಕ್ಕೆ, ಪ್ರದೇಶಕ್ಕೆ ತಕ್ಕಂತೆ ಜಾಲದಲ್ಲಿ ಬದಲಾಗುವ ವ್ಯವಸ್ಥೆಯೂ ಇದೆ. ಈ ಸೌಭಾಗ್ಯ ಕನ್ನಡದ ಜಾಲಕ್ಕೆ ಇಲ್ಲವಲ್ಲ! ನಮ್ಮ ದೇಶದ ಇತರ ಭಾಷೆಗಳ ಜಾಲಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎಂದು ಕೊಂಡಿದ್ದೇನೆ.

ದಿನಕ್ಕೆ ನನ್ನ ಬ್ಲಾಗಿನಂತೆ ನೂರಾರು ಬ್ಲಾಗುಗಳು ಹುಟ್ಟುತ್ತವೆ, ಬಹಳಷ್ಟು ಹುಟ್ಟುತ್ತಲೇ ಸಾಯುತ್ತವೆ, ಕೆಲವು (ನನ್ನ ಬ್ಲಾಗಿನಂತೆ) ತೆವಳುತ್ತ ತೆವಳುತ್ತ ಇನ್ನೂ ಉಸಿರಾಡುತ್ತಿವೆ, ಕೆಲವೇ ಕೆಲವು ಮಾತ್ರ ಗಟ್ಟಿಯಾಗಿ ಬೇರುರುತ್ತಿವೆ (ಶಿವು, ಶ್ರೀಶಂ, ಮಲ್ಲಿಕಾರ್ಜುನ, ಸಿಮೆಂಟು ಮರಳು ಇತ್ಯಾದಿ). ಗ್ರುಪ್‍ಬ್ಲಾಗುಗಳಾದ ಅವಧಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ ಕೆಂಡಸಂಪಿಗೆಯನ್ನು ಹೋಲುವ ಅಥವಾ ಅದಕ್ಕೆ ಸಮಾಂನಾಂತರವಾಗಿ ಇರುವ ಒಂದೇ ಒಂದು ಜಾಲವಿಲ್ಲದಿರುವುದು ಕನ್ನಡದ ದುರಂತವೇ ಸರಿ.

ಯಾಹೂ ಕನ್ನಡ, ದಾಟ್ಸ್ ಕನ್ನಡ, ವೆಬ್ ದುನಿಯಾಗಳು ಸುದ್ದಿಗಿಂತ ಹೆಚ್ಚೇನನ್ನೂ ಕೊಡಲಾರವು. ಇದ್ದರೂ ಅದು ಪಾಪ್ ಕಲ್ಚರ್‍ಗೆ ಸೀಮಿತ. ಕೆಂಡಸಂಪಿಗೆಯಂಥ ಬರಹಗಳು ಅವುಗಳಲ್ಲಿ ಕಡಿಮೆಯೇ.

ನಾಡಿನಿಂದ ದೂರ ಕೂತಿರುವ ನನ್ನಂಥವರಿಗೆ ಜಾಲಗಳು ಕೊಂಡಿಯಾಗಿ ಕೂತಿವೆ. ಲಂಕೇಶ್ ಸತ್ತಮೇಲೆ ಪತ್ರಿಕೆ ಸತ್ತಿದೆ. ಇದ್ದುದರಲ್ಲೇ ಒಂಚೂರು ಲಂಕೇಶ್ ಪತ್ರಿಕೆ ಹೋಲುವ ಹಾಯ್, ಜಾಲದಲ್ಲಿ ಲಬ್ಯವಿಲ್ಲ. ತರಂಗ ಸುಧಾ ತಮ್ಮ ಗುಣಮಟ್ಟ ಯಾವತ್ತೋ ಕಳೆದುಕೊಂಡು ಬಿಟ್ಟಿವೆ. ಇದ್ದುದರಲ್ಲ ಮಯೂರವೇ ವಾಸಿ. ಆದರೆ ಈ ಪತ್ರಿಕೆಗಳ ಜಾಲಗಳು ಓದಲು ಆಗದಷ್ಟು ಕಷ್ಟಕೊಡುತ್ತವೆ.

ಪ್ರತಿಸಲ ಭಾರತಕ್ಕೆ ಹೋದಾಗ ತರುವ ಕನ್ನಡ ಪುಸ್ತಕಗಳೇ ಇನ್ನು ಗತಿ ಅನಿಸುತ್ತದೆ. ಆದರೆ ಒಂದು ದಿಗಿಲು ನನ್ನಲ್ಲಿ ಬಹುಷಃ ಯಾವಾಗಲೂ ಕಾಡುತ್ತದೆ, "ಕನ್ನಡ ಬೆಡಗು ಪರಿಮಳ ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಿದೆಯೇ? ಕನ್ನಡ ಮುಂದೊಂದು ದಿನ ಸಾಯಲಿದೆಯೇ?"

Friday, October 02, 2009

ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ

ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಲ್ಲ



ಇದ್ದ

ನಮ್ಮಜ್ಜ-ಅಜ್ಜಿಯರ
ನಮ್ಮಪ್ಪ-ಅಮ್ಮರ
ನನ್ನ-ನಿನ್ನ
ನಡುವೆ
ಇದ್ದ


ನಮ್ಮಜ್ಜ
ತನಗೆ ವಾರಸುದಾರರಿಲ್ಲವೆಂದು
ತನ್ನ ಮೂರನೇ ಹೆಂಡತಿಯಲ್ಲಿ
ನನ್ನಪ್ಪನನ್ನು ಬಿತ್ತುವ ವೇಳೆ
ಎದ್ದ



ನನ್ನಪ್ಪ
ಮೆಟ್ರಿಕ್ಯುಲೇಷನ್ನು ಮುಗಿಸಿ
ಬ್ರಿಟೀಷರ ಕೆಳಗೆ
ಮಾಮಲೆದಾರನಾಗಿ
ಸಂಬಳವೆಣಿಸುತ್ತಿರುವಾಗ
ಗೆದ್ದ


ನಾನು
ಪುಗಸಟ್ಟೆ M.B.B.S ಮುಗಿಸಿ
ದೇಶಬಿಟ್ಟು ಇಂಗ್ಲಂಡಿಗೆ
ಬಂದಾಗ
ಬಿದ್ದ


(ಈ ಹಿಂದೆ ಬರೆದ ಕವನವನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ, ಗಾಂಧಿಯನ್ನು ನೆನೆಯತ್ತಾ)

Wednesday, September 23, 2009

ನೀಲು ೨೭


ದೇವರು ಆತ್ಮ ಆಧ್ಯಾತ್ಮ 

ಕಲೆ ಕಾವ್ಯ ಮದಿರೆ

ಕೊಡುವ ಎಲ್ಲ ಕಿಕ್ಕುಗಳೂ

ನನ್ನ ಒಂದು ತೆಕ್ಕೆಯಲ್ಲಿ

ನಿನಗೆ ಸಿಕ್ಕದ ದಿನ

ನಿನ್ನ ನೀಲು ಸಾಯುತ್ತಾಳೆ

ಬರೆದಿಟ್ಟುಕೋ!